ರಾಸಾಯನಿಕ ಕ್ರಿಯೆ
	ಯಾವುದೇ ರಾಸಾಯನಿಕದ ಮೂಲ ರಚನೆಯನ್ನು ವ್ಯತ್ಯಯಿಸಿ ಇನ್ನೊಂದು ಪದಾರ್ಥವಾಗಿ ರೂಪಿಸುವ ಪ್ರಕ್ರಿಯೆ (ಕೆಮಿಕಲ್‍ರಿಆ್ಯಕ್ಷನ್). ಈ ಪದಾರ್ಥದಲ್ಲಿ ಮೂಲ ರಾಸಾಯನಿಕದ ಅಥವಾ ರಾಸಾಯನಿಕಗಳ ಬೀಜಗಳು (ನ್ಯೂಕ್ಲಿಯೈ) ಉಳಿದಿದ್ದರೂ ಆಕೃತಿ ಅಥವಾ ಪರಮಾಣುಗಳ ಶಕ್ತಿ ಮುಂತಾದವು ಮಾತ್ರ ಬೇರೆಯೇ ಆಗಿರುತ್ತವೆ. ಈ ಕ್ರಿಯೆಯಲ್ಲಿ ಮೊದಲ ವಸ್ತುವಿನ ಮೂಲಗುಣಗಳು ಕಣ್ಮರೆಯಾಗಿ ಉತ್ಪನ್ನದಲ್ಲಿ ಹೊಸಗುಣಗಳು ಗೋಚರಿಸುತ್ತವೆ. ಆದರೆ, ಕ್ರಿಯಾತ್ಮಕ ಘಟಕಗಳ ಒಟ್ಟುತೂಕ ಉತ್ಪನ್ನಗಳ ಒಟ್ಟು ತೂಕಕ್ಕೆ ಸಮವಾಗಿರುತ್ತದೆ. ಉತ್ಪನ್ನದ ಗುಣಗಳು ಅದರಲ್ಲಿರುವ ವಿವಿಧ ಧಾತು ಕಣಗಳ ಪ್ರಮಾಣವನ್ನು ಆಧರಿಸಿವೆ. ಜೊತೆಗೆ ರಾಸಾಯನಿಕ ಕ್ರಿಯೆಯಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ. ಬೆಂಕಿಕಡ್ಡಿಯನ್ನು ಹೊತ್ತಿಸುವುದು, ಕಬ್ಬಿಣ ತುಕ್ಕು ಹಿಡಿಯುವಿಕೆ, ದೇಹದಲ್ಲಿ ತಿಂದ ಆಹಾರ ಜೀರ್ಣವಾಗುವಿಕೆ ಮುಂತಾದವು ರಾಸಾಯನಿಕ ಕ್ರಿಯೆಗಳಿಗೆ ನಿದರ್ಶನಗಳು.
	ಪ್ರತೀಕಗಳ ಮೂಲಕ ರಾಸಾಯನಿಕ ಕ್ರಿಯೆಗಳನ್ನು ನಿರೂಪಿಸುವುದು ವಾಡಿಕೆ. ಉದಾಹರಣೆಗೆ ಹೈಡ್ರೊಜನ್ನಿನ 2 ಪರಮಾಣುಗಳೂ ಆಕ್ಸಿಜನ್ನಿನ 1 ಪರಮಾಣುವೂ ರಾಸಾಯನಿಕ ಕ್ರಿಯೆ ಮೂಲಕ ಸಂಯೋಜನೆಗೊಂಡಾಗ ನೀರಿನ 1 ಅಣು ದೊರೆಯುತ್ತದೆ. ಈ ಕ್ರಿಯೆಯನ್ನು  
2H + O ® H2O
ಎಂದು ಬರೆಯುತ್ತೇವೆ. ಇಲ್ಲಿ H ಮತ್ತು O ಅನುಕ್ರಮವಾಗಿ ಹೈಡ್ರೊಜನ್ ಮತ್ತು ಆಕ್ಸಿಜನ್ ಪರಮಾಣುಗಳು, H20 ನೀರಿನ ಅಣು.	
(ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ